ಸದಾಶಿವಗಡ
	ಕಾರವಾರ ತಾಲ್ಲೂಕಿನ ಸಮುದ್ರತೀರದ ಒಂದು ಪಟ್ಟಣ ಮತ್ತು ಬಂದರು. ಕಾರವಾರದ ಉತ್ತರಕ್ಕೆ 5 ಕಿಮೀ ದೂರದಲ್ಲಿ ಕಾಳಿನದಿಯ ಬಲಭಾಗದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ಮಧ್ಯೆ ಕಾಳಿ ನದಿ ಹರಿದು ಅರಬ್ಬಿ ಸಮುದ್ರವನ್ನು ಸೇರುವುದು.  ಇಲ್ಲಿರುವ ಗುಡ್ಡದ ಮೇಲಿನ ಕೋಟೆಯನ್ನು 17ನೆಯ ಶತಮಾನದಲ್ಲಿ ಸೋದೆಯ ಒಂದನೆಯ ಸದಾಶಿವನಾಯಕ ಕಟ್ಟಿಸಿದನೆಂದು ತಿಳಿದು ಬರುತ್ತದೆ. ಸುಂಕೇರಿಯಲ್ಲಿದ್ದ ಇಂಗ್ಲಿಷರಿಂದ ರಕ್ಷಣೆಯನ್ನು ಹೊಂದಲು ಸದಾಶಿವನಾಯಕ ಇಲ್ಲಿ ಮೂರುಸುತ್ತಿನ ಕೋಟೆಯನ್ನು ಕಟ್ಟಿಸಿದ; ಹಾಗಾಗಿ ಈ ಕೋಟೆ ಮತ್ತು ಸ್ಥಳಕ್ಕೆ ಸದಾಶಿವಗಡ ಎಂಬ ಹೆಸರು ಬಂತೆಂದು ಪ್ರತೀತಿ. ಇಲ್ಲಿ ಅನೇಕ ಹಳೆಯ ಕಾಲದ ತೋಪುಗಳು, ಬಾವಿ, ಪಾಣಿಕಿಲ್ಲಾ ಬಾಳೆಕಿಲ್ಲಾ ಕೊತ್ತಲುಗಳು ಮತ್ತು ಕಿಂಡಿಗಳನ್ನು ಈಗಲೂ ಕಾಣಬಹುದು. ಹಿಂದೆ ಸದಾಶಿವಗಡಕ್ಕೆ ಬಾಳೆಕಿಲ್ಲೆ ಎಂಬ ಹೆಸರಿತ್ತೆಂದೂ 9ನೆಯ ಶತಮಾನದಲ್ಲಿ ಅರಬರ ಹಡಗುಗಳು ವ್ಯಾಪಾರ ಕ್ಕಾಗಿ ಇಲ್ಲಿಗೆ ಬರುತ್ತಿದ್ದವೆಂದೂ ತಿಳಿದುಬರುತ್ತದೆ. ಇಂಗ್ಲಿಷರ ಹಳೆಯ ದಾಖಲೆಗಳಲ್ಲಿ ಈ ಊರಿನ ಹೆಸರು ಚಿಟ್ಕುಳೆ ಎಂದಿದೆ. 1514ರ ಸುಮಾರಿಗೆ ಬಂದ ಪೋರ್ಚುಗೀಸಿನ ಬಾರ್ಬೋಸ ಎಂಬ ಪ್ರವಾಸಿ ಇದನ್ನು ಸಿಂತಾಕಾರಾ ಎಂದು ಕರೆದಿದ್ದಾನೆ. 1673-75ರ ಸಮಯದಲ್ಲಿ ಅಂಕೋಲ ಹಾಗೂ ಮತ್ತಿತರ ಪ್ರದೇಶವನ್ನು ಬಿಜಾಪುರದ ಕೊನೆಯ ರಾಜನಿಂದ ಶಿವಾಜಿ ಕಸಿದುಕೊಂಡು ಸದಾಶಿವಗಡ ಕೋಟೆಯನ್ನು ಕಟ್ಟಿಸಿದನೆನ್ನುವರು. ವಿದೇಶಿ ಪ್ರವಾಸಿ ಫ್ರಾಯರ್ ಎಂಬಾತ 1675-76ರ ಸುಮಾರಿಗೆ ಈ ಪ್ರದೇಶಗಳಿಗೆ ಭೇಟಿನೀಡಿದ್ದ. ಶಿವಾಜಿ ಈ ಪ್ರದೇಶಕ್ಕೆ ಬಂದ ಅನಂತರ ಭವಾನಿ ದೇವತೆಯ ಉಪಾಸನಾಪದ್ಧತಿ ಬಳಕೆಯಲ್ಲಿ ಬಂದು ದುರ್ಗಾದೇವಿ ದೇವಾಲಯವನ್ನು ಇಲ್ಲಿ ಕಟ್ಟಿಸಲಾ ಯಿತು. ಕಲ್ಯಾಣದಿಂದ ವಲಸೆ ಬಂದ ಕೊಂಕಣ ಮರಾಠರು, ಕಾರವಾರ ದಲ್ಲಿ ಮುಸಲ್ಮಾನರೊಡನೆ ಜಗಳವಾಡಿ ಅದನ್ನು ಬಿಟ್ಟು ಸದಾಶಿವಗಡ ದಲ್ಲಿ ಬಂದು ನೆಲೆಸಿದರೆನ್ನುವರು.  ಪ್ರತಿವರ್ಷ ಮನೊತ್ರಿ ದಿಬ್ಬದಲ್ಲಿ ದಸರ ಉತ್ಸವವನ್ನು ಎಲ್ಲರೂ ಕೂಡಿ ಆಚರಿಸುತ್ತಾರೆ.     							
			(ಆರ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ